ಶ್ವೇತಾಂಬರ ಪಂಥ

	ಜೈನಧರ್ಮದ ಎರಡು ಪಂಥಗಳಲ್ಲೊಂದು; ಇನ್ನೊಂದು ದಿಗಂಬರ ಪಂಥ (ನೋಡಿ- ದಿಗಂಬರ-ಪಂಥ) ಮಹಾವೀರನಿಂದ ಬೋಧಿಸಲ್ಪಟ್ಟ ಜೈನಧರ್ಮ ಕಾಲಕ್ರಮೇಣ ಇಬ್ಭಾಗವಾಗಿ ಶ್ವೇತಾಂಬರ ಹಾಗೂ ದಿಗಂಬರ ಪಂಥಗಳು ಹುಟ್ಟಿಕೊಂಡವು. ಶ್ವೇತಾಂಬರ ಪಂಥ ದಿಗಂಬರ ಪಂಥಕ್ಕಿಂತ ಇತ್ತೀಚಿನದೆಂಬುದು ನಿರ್ವಿವಾದ. ಶ್ವೇತಾಂಬರ ಪಂಥ ಉದಾರವಾದಿ ಪಂಥವಾದರೆ ದಿಗಂಬರ ಪಂಥ ಸಂಪ್ರದಾಯವಾದಿ ಪಂಥವಾಗಿದ್ದಿತು. ಈ ಪಂಥಗಳ ಏಳಿಗೆ ಬಗ್ಗೆ ಜೈನಗ್ರಂಥಗಳು ತಮ್ಮದೇ ಆದ ವಿವರಣೆಯನ್ನು ನೀಡುತ್ತವೆ. ಅದರಂತೆ ಚಂದ್ರಗುಪ್ತ ಮೌರ್ಯನ ಆಳಿಕೆಯ ಕೊನೆಯ ಕಾಲದಲ್ಲಿ ಉತ್ತರಭಾರತದಲ್ಲಿ ಭೀಕರ ಕ್ಷಾಮವೊದಗಿತು. ಆಗ ಜೈನರ ಒಂದು ಗುಂಪು ಭದ್ರಬಾಹುವಿನೊಡನೆ ದಕ್ಷಿಣ ಭಾರತಕ್ಕೆ ಬಂದು ಶ್ರವಣಬೆಳಗೊಳದಲ್ಲಿ ನೆಲೆಸಿತು. ಇದರೊಂದಿಗೆ ಚಂದ್ರಗುಪ್ತ ಮೌರ್ಯನೂ ಬಂದಿದ್ದ. ಇವರೆಲ್ಲರೂ ಜೈನಧರ್ಮದ ತತ್ತ್ವಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಹನ್ನೆರಡು ವರ್ಷಗಳ ಕ್ಷಾಮ ಮುಗಿದ ಅನಂತರ ಇವರು ಪುನಃ ಉತ್ತರಭಾರತಕ್ಕೆ ಹೋದರು. ಹೀಗೆ ಹೋದಾಗ ಇವರ ಆಚರಣೆಗಳಿಗೂ ಅಲ್ಲಿಯ ಜೈನರ ಆಚರಣೆಗಳಿಗೂ ಅಜಗಜಾಂತರ ವ್ಯತ್ಯಾಸಗಳಿದ್ದುವು. ಆಗ ಇವರು ಪ್ರತ್ಯೇಕ ಪಂಗಡವಾಗಿ  ದಿಗಂಬರ ಪಂಥವೆಂದು ಗುರುತಿಸಲ್ಪಟ್ಟರು. ಅಲ್ಲೇ ಉಳಿದಿದ್ದ ಪಂಥದವರು ಶ್ವೇತಾಂಬರ ಪಂಥದವರೆಂದು ಪರಿಗಣಿತವಾದರು. 

	23ನೆಯ ತೀರ್ಥಂಕರನಾದ ಪಾಶ್ರ್ವನಾಥನ ಶಿಷ್ಯರು ಎರಡು ಬಿಳಿಯವಸ್ತ್ರ (ಶ್ವೇತಾಂಬರ) ಗಳನ್ನು ಧರಿಸುತ್ತಿದ್ದರು. 24ನೆಯ ತೀರ್ಥಂಕರನಾದ ಮಹಾವೀರ ನಗ್ನತೆಯ (ವಿವಸ್ತ್ರದ) ತತ್ತ್ವವನ್ನು ಪಾಲಿಸಿದ. ಈತನ ಸನ್ಯಾಸಿ ಅನುಯಾಯಿಗಳೂ ವಿವಸ್ತ್ರರಾಗಿದ್ದರು. ಹೀಗೆ ಈ ಎರಡು ಪಂಥಗಳಾದವೆಂದು ವಿದ್ವಾಂಸರಾದ ಕೆ.ವಿ. ನೀಲಕಂಠಶಾಸ್ತ್ರೀ ಅಭಿಪ್ರಾಯ ಪಟ್ಟಿದ್ದಾರೆ. ಕ್ರಿ.ಪೂ.3ನೆಯ ಶತಮಾನದಲ್ಲಿ ಇವೆರಡೂ ಪಂಥಗಳ ನಡುವಣ ಒಡಕು ಮತ್ತಷ್ಟು ಸುಸ್ಪಷ್ಟವಾಯಿತು. ದಿಗಂಬರರು ಮಹಾವೀರನ ಬೋಧನೆಗಳನ್ನು ನಗ್ನತೆ, ದೇಹದಂಡನೆ ಮತ್ತು ಕಠೋರವಾದ ತಪಶ್ಚರ್ಯದ ತತ್ತ್ವಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಶ್ವೇತಾಂಬರರು ಪಾಶ್ರ್ವನಾಥನ ತತ್ತ್ವಗಳ ಪಾಲಕರಾಗಿದ್ದು, ತತ್ತ್ವಾಚರಣೆಯಲ್ಲಿ ಕಾರ್ಯಸಾಧ್ಯವಾದ ದೃಷ್ಟಿಕೋನ ಹೊಂದಿದ್ದರು. ಶ್ವೇತಾಂಬರ ಪಂಥದಲ್ಲಿ ಸ್ತ್ರೀಯರೂ ತಪಸ್ಸುಮಾಡಿ ಈ ಭವದಲ್ಲಿಯೇ ಮೋಕ್ಷ ಪಡೆಯಬಹು ದೆಂಬುದೂ ಜೈನರ ಹದಿನೆಂಟನೆಯ ತೀರ್ಥಂಕರನಾದ ಮಲ್ಲಿನಾಥನದು ಸ್ತ್ರೀ ಜನ್ಮವೆಂಬುದೂ ಶ್ವೇತಾಂಬರ ಪಂಥದವಾದ. ಆದರೆ ಈ ವಿಚಾರವನ್ನು ದಿಗಂಬರ ಪಂಥ ಒಪ್ಪುವುದಿಲ್ಲ. ಸ್ತ್ರೀಯರು ದಿಗಂಬರ ದೀಕ್ಷೆಗೆ ಅರ್ಹರಲ್ಲವೆಂದೂ ಅವರು ಆರ್ಜಿಕೆಯರಾಗಿ ತಪಸ್ಸಾಚರಿಸಿ ಪುರುಷ ಜನ್ಮವೆತ್ತಿ ದಿಗಂಬರ ದೀಕ್ಷೆಯಿಂದ ಮೋಕ್ಷಕ್ಕೆ ಹೋಗಬಹು ದೆಂದೂ ಇವರ ವಾದ. ಕೇವಲ ಜ್ಞಾನಿಗೆ ಆಹಾರ ಬೇಕೆಂಬುದು ಶ್ವೇತಾಂಬರ ಪಂಥದ ನಿಲುವಾದರೆ, ದಿಗಂಬರ ಪಂಥ ಕೇವಲ ಜ್ಞಾನಿಗೆ ಆಹಾರ ಬೇಕಿಲ್ಲವೆನ್ನುತ್ತದೆ. ಶ್ವೇತಾಂಬರ ಪಂಥ ವಿವಾಹವನ್ನು ಪುರಸ್ಕರಿಸಿದರೆ ದಿಗಂಬರ ಪಂಥ ತಿರಸ್ಕರಿಸುತ್ತದೆ. ಅನಂತರದಲ್ಲಿ ಇವೆರಡೂ ಪಂಥಗಳನ್ನು ಸಮನ್ವಯಗೊಳಿಸಲು ಯಾಪನೀಯ ಎಂಬ ಮತ್ತೊಂದು ಪಂಥ ಉಗಮಗೊಂಡಿತೆಂದು ತಿಳಿದುಬರುತ್ತದೆ.							
		*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ